ಹೊಸ ಮಳೆಯ ಆಗಮನದಿಂದ ಬೆಂಗಳೂರು ಕೂಲ್ ಆಗಿದೆ. ಮಾರ್ಚ್ ೧೨ ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ, ಅದಕ್ಕೂ ಮುಂಚೆ ಕೇಂದ್ರ ಸಚಿವ ನಿತಿನ್ ಗಡ್ಕರಿ ವೈಮಾನಿಕ ಸಮೀಕ್ಷೆ ನಡಿಸಿದ, ಹಾಗು ಸಂಸದ ಪ್ರತಾಪ್ ಸಿಂಹ ಹಾಗು ಇನ್ನಿತರೇ ಬಿಜೆಪಿ ನಾಯಕರು ಪ್ರಶಂಸೆ ಮಾಡಿದ ‘ಬೆಂಗಳೂರು-ಮೈಸೂರು’ ಎಕ್ಸ್ಪ್ರೆಸ್ ಹೈವೇ ಮತ್ತೆ ಸುದ್ದಿಯಲ್ಲಿದೆ.

ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿಯ ಬಳಿ ಹೆದ್ದಾರಿಯು ಜಲಾವೃತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವರ್ಷದ ಮೊದಲ (ಕಡು ಬೇಸಿಗೆಯ) ಮಳೆಗೆ ಈ ಪರಿಸ್ಥಿತಿಯಾದರೆ, ಮಳೆಗಾಲದಲ್ಲಿ ನಮ್ಮ ಸ್ಥಿತಿ ಏನು ಎಂದು ಜನರು ಪ್ರಶ್ನಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ನಿರ್ಮಾಣಗೊಂಡ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ. ಕಳೆದ ೩-೪ ದಿನಗಳಿಂದ ಸುರಿದ ಮಳೆಯಿಂದಾಗಿ ರೇಷ್ಮೆ ನಗರಿ ರಾಮನಗರ, ಗೊಂಬೆ ನಾಡು ಚೆನ್ನಪಟ್ಟಣ ತಾಲೂಕು ಮತ್ತು ಜಿಲ್ಲೆಗಳು ತತ್ತರಿಸಿ ಹೋಗಿವೆ.
ಎಲ್ಲಿ ನೋಡಿದರು ನೀರು ! ಮುಳುಗಿರುವ ಕಾರು ಮತ್ತು ಬಸ್ಸು. ಆತಂಕದಲ್ಲಿ ಜನರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ರಾಮನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ. ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.