
ಬೆಂಗಳೂರು: ಗೈಲ್ ಕಂಪನಿಯ ಗ್ಯಾಸ್ ಪೈಪ್ ಲೈನಿಂದ ಸೋರಿಕೆಯಾಗಿ ಭೀಕರ ಸ್ಪೋಟವಾಗಿದೆ. ಇಬ್ಬರು ಮಹಿಳೆಯರಿಗೆ ಗಂಭೀರವಾದ ಗಾಯಗಳಾಗಿವೆ. ಈ ಘಟನೆಯು ಎಚ್. ಎಸ್. ಆರ್ ಲೇ ಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹೆಚ್‌ಎಸ್‌ಆರ್ ಲೇಔಟ್‌ನ 2ನೇ ಹಂತದ 23ನೇ ಕ್ರಾಸ್ ನಿವಾಸಿಗಳಾದ ಲೈಕಾ ಅಂಜುಂ (46) ಮತ್ತು ಮುಬಾಶಿರಾ (40) ಗಾಯಗೊಂಡವರು. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಮದೀನ ಮಸೀದಿ ಬೆಂಗಳೂರು ಜಲಮಂಡಳಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಅಗೆಯಲಾಗಿದೆ. ಈ ವೇಳೆ ಗೇಲ್ನ ಗ್ಯಾಸ್ ಪೈಪ್ ಲೈನ್ಗೆ ಹಾನಿಯಾಗಿ ಗ್ಯಾಸ್ ಸೋರಿಕೆಯಾಗಿದೆ. ಸೋರಿಕೆಯಾದ ಗ್ಯಾಸ್ ಸ್ಯಾನಿಟರಿ ಪೈಪ್ ಮೂಲಕ ಲೈಕಾ ಅಂಜುಂ ಮತ್ತು ಮುಬಾಶಿರಾ ಅವರ ಅಡುಗೆ ಮನೆಗೆ ಹರಡಿಕೊಂಡಿದೆ. ಗುರುವಾರ (ಮಾ.16) ರಂದು ಬೆಳಿಗ್ಗೆ 9:30ರ ಸುಮಾರಿಗೆ ಇಬ್ಬರು ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ಎರಡೂ ಮನೆಯೊಳಗೆ ಏಕಾಏಕಿ ದೊಡ್ಡ ಸ್ಪೋಟ ಸಂಭಿಸಿದೆ. ಇದರಿಂದ ಲೈಕಾ ಮತ್ತು ಮುಬಾಶಿರಾ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರು ಕೂಡಲೇ ಮನೆ ಪ್ರವೇಶಿಸಿ ಗಾಯಾಳುಗಳನ್ನು ಹೊರಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರತಿ 3 ದಿನಗಳಿಗೊಮ್ಮೆ 1 ಗ್ಯಾಸ್ ಪೈಪ್‌ಲೈನ್ ಸೋರಿಕೆ
ನಗರದಲ್ಲಿ ಪ್ರತಿ 3 ದಿನಗಳಿಗೊಮ್ಮೆ 1 ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗುತ್ತಿದೆ ಎಂದು ಗೇಲ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್‌ನ ಮನೆಗಳಲ್ಲಿ ಸಂಭವಿಸಿದ ಸ್ಫೋಟಕಕ್ಕೆ ಸಂಬಂಧಿಸಿದಂತೆ, ಮನೆಗಳಿಗೆ ಶೌಚಾಲಯಕ್ಕೆ ಒಳಚರಂಡಿ ಮೂಲಕ ಅನಿಲ ಪ್ರವೇಶಿಸಿದೆ. ಇದರಿಂದ ದುರಂತ ಸಂಭವಿಸಿದೆ. ಇದು ನಗರದಲ್ಲಿ ಎರಡನೇ ಪ್ರಕರಣವಾಗಿದ್ದು, ಮೊದಲ ಘಟನೆ 2018 ರಲ್ಲಿ ಸಿಂಗಸಂದ್ರದಲ್ಲಿ ನಡೆದಿತ್ತು.
2016 ರಲ್ಲಿ ಬೆಂಗಳೂರಿನಲ್ಲಿ ಪಿಎನ್ಜಿ ಪೂರೈಕೆ ಪ್ರಾರಂಭವಾಗಿದೆ. ದುರಂತಗಳನ್ನು ತಡೆಗಟ್ಟಲು ಸೋರಿಕೆಯನ್ನು ತ್ವರಿತವಾಗಿ ಸರಿಪಡಿಸಲಾಗಿದೆ. ಇದು ನಿಜವಾಗಿಯೂ ಸುರಕ್ಷತೆಯ ಕಾಳಜಿಯಾಗಿದೆ. BWSSB ಅಥವಾ BESCOM ಗಳು ಅನುಮತಿಯನ್ನು ಪಡೆಯದೆ ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದಕ್ಕೆ ಹಾನಿಯುಂಟಾಗುತ್ತಿದೆ ಎಂದು ಗೇಲ್ ಉಪ ಪ್ರಧಾನ ವ್ಯವಸ್ಥಾಪಕ , ಕಾರ್ಯಾಚರಣೆ ಮತ್ತು ನಿರ್ವಹಣೆ ಅಧಿಕಾರಿ ರವಿಕುಮಾರ್ ರೆಬ್ಬಾ ತಿಳಿಸಿದ್ದಾರೆ.